ಕ್ಲೈಸ್ತೆನೀಸ್ 

 	ಪ್ರಾಚೀನ ಗ್ರೀಸಿನ ಇಬ್ಬರು ರಾಜಕಾರಣಿಗಳು ಈ ಹೆಸರಿನವರು. ಒಬ್ಬ ಸಿಕಿಯಾನ್ ಪಟ್ಟಣದವ, ಇನ್ನೊಬ್ಬ ಅಥೆನ್ಸ್ ನಗರದವ.

	ಕ್ಲೈಸ್ತೆನೀಸ್, ಸಿಕಿಯಾನಿ : ಸಿಕಿಯಾನಿ ಕ್ಲೈಸ್ತೆನೀಸ್ (ಕ್ರಿ. ಪೂ. 600-570) ಡೋರಿಯನರ ವಿರೋಧ ಪಂಗಡಕ್ಕೆ ಸೇರಿದ ಮತ್ತು ಅಯೊನಿಯನರ ಸಹಾಯದಿಂದ ಅಧಿಕಾರ ಸ್ಥಾಪಿಸಿದ್ದ ಆರ್ಥಗೊರಾಸ್ ವಂಶಸ್ಥ. ಡೋರಿಯನರ ಸೊಕ್ಕನ್ನು ಮುರಿಯುವುದು ಇವನ ಧ್ಯೇಯ. ಇವನು ಆರ್ಗಾಸ್ ಪಟ್ಟಣಕ್ಕೆ ಮುತ್ತಿಗೆ ಹಾಕಿ, ಡೋರಿಯನ್ ವೀರರ ಬಗ್ಗೆ ಆದರ ಹೊಂದಿದ್ದ ಜನರನ್ನೆಲ್ಲ ನಾಶಮಾಡಿದ. ಕ್ರಿ.ಪೂ. 590ರಲ್ಲಿ ನಡೆದ ಧಾರ್ಮಿಕ ಯುದ್ಧದಲ್ಲಿ ಇವನು ಡೆಲ್ಫಿಯ ಪರವಾಗಿ ನಿಂತು ಕ್ರಿಸ್ತ ನಗರವನ್ನು ಮುತ್ತಿ ಅದನ್ನು ನಾಶಗೊಳಿಸಿದ. ಡೆಲ್ಷಿಯವನ್ನು ಕೇಂದ್ರವನ್ನಾಗಿಟ್ಟುಕೊಂಡು ಇವನು ಪೈಥಿಯನ್ ಕ್ರೀಡೆಗಳಿಗೆ ಪ್ರೋತ್ಸಾಹ ಕೊಟ್ಟು ಕ್ರಿ.ಪೂ. 528ರಲ್ಲಿ ನಡೆದ ರಥಗಳ ಪಂದ್ಯದಲ್ಲಿ ಮೊದಲನೆಯ ಸ್ಥಾನ ಗಳಿಸಿದ. ಇವನ ಕಾಲದಲ್ಲಿ ಸಿಕಿಯಾನ್ ಮತ್ತು ಡೆಲ್ಫಿ ನಗರಗಳು ಸಂಪದ್ಭರಿತವಾಗಿದ್ದವು.

	ಕ್ಲೈಸ್ತೆನೀಸ್ ಅಥೆನ್ಸಿನ: ಅಥೆನ್ಸಿನ ಪ್ರಖ್ಯಾತ ರಾಜಕಾರಣಿ. ಕ್ರಿ.ಪೂ. 6ನೆಯ ಶತಮಾನದ ಅಂತ್ಯಭಾಗದಲ್ಲಿದ್ದ. ಮೆಗಕ್ಲಿಸ್ ಮತ್ತು ಆಗರಿಸ್ಟೆಯರ ಮಗ. ಸ್ಪಾರ್ಟದ ದೊರೆ 1ನೆಯ ಕ್ಲಿಯಾಮೆನೀಸನ ಸಹಾಯದಿಂದ ಇವನು ಕ್ರಿ.ಪೂ. 510ರಲ್ಲಿ ಪಿನಿಸ್ಟ್ರಟೈಡೆ ಜನಾಂಗವನ್ನು ಅಥೆನ್ಸಿನಿಂದ ಓಡಿಸಿ, ಅಥೆನ್ಸಿನ ಜನ ನಿರಂಕುಶ ಪ್ರಭುತ್ವವನ್ನು ಸಹಿಸುವುದಿಲ್ಲವೆಂದು ಘೋಷಿಸಿ ಶ್ರೀಮಂತರ ಆಗ್ರಹಕ್ಕೆ ತುತ್ತಾಗಿ ಜನಸಾಮಾನ್ಯರ ಪಕ್ಷ ಸೇರಿದ. ಇವನಿಗೂ ಇವನ ಎದುರಾಳಿಯಾದ ಐಸಾಗರಸನಿಗೂ ನಡುವೆ 508ರಲ್ಲಿ ವಿರಸ ತಲೆದೋರಿದಾಗ ಸಭೆಯ ಸದಸ್ಯರು ಕ್ಲೈಸ್ತೆನೀಸನ ಪ್ರಜಾಪ್ರಭುತ್ವಗಳನ್ನು ಒಪ್ಪಿಕೊಂಡರು. ಆದರೆ ಐಸಾಗರಸ್ ಸ್ಪಾರ್ಟದ ಸಹಾಯ ಪಡೆದು ಕ್ಲೈಸ್ತೆನೀಸ್ ಮತ್ತು ಅವನ ಅನುಯಾಯಿಗಳನ್ನು ದೇಶಭ್ರಷ್ಟರನ್ನಾಗಿಸಿದ. ಪ್ರಜಾಪಕ್ಷದವರು ದಂಗೆಯೆದ್ದು, ಕ್ಲಿಯಾಮೆನೀಸ್ ಮತ್ತು ಐಸಾಗರಸರ ಅಧಿಕಾರವನ್ನು ಕಸಿದುಕೊಂಡು, ಕ್ಲೈಸ್ತೆನೀಸನನ್ನು ಸ್ವದೇಶಕ್ಕೆ ಬರಮಾಡಿಕೊಂಡರು. ಪ್ರಜಾರಾಜ್ಯವನ್ನು ಅಥೆನ್ಸಿನಲ್ಲಿ ಸ್ಥಾಪನೆಗೊಳಿಸಲು ಸಾಧ್ಯವಾದ್ದಕ್ಕೆ ಕ್ಲೈಸ್ತೆನೀಸನೇ ಕಾರಣ. ದೇಶದ ಪಂಗಡಗಳನ್ನು ಬಹಳಮಟ್ಟಿಗೆ ಪುನರ್ರಚಿಸಿ ಪ್ರಾದೇಶಿಕತೆಯ ಮನೋಭಾವವನ್ನು ತೊಡೆದುಹಾಕಿ ರಾಷ್ಟ್ರೀಯತೆಯನ್ನು ಸ್ಥಾಪಿಸಲು ಇವನು ಕೈಗೊಂಡ ಕ್ರಮಗಳು ಶಾಶ್ವತ ಫಲ ನೀಡಿದವು. ಮತದಾನದ ಹಕ್ಕನ್ನು ಸುಧಾರಿಸಿ ಪ್ರಭುತ್ವದಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ಮಾಡಿದ ಕೀರ್ತಿ ಸಹ ಇವನದು. ಸ್ವಾರ್ಥಿ ಮತ್ತು ಸರ್ವಾಧಿಕಾರಿ ನಾಯಕರನ್ನು ಅಧಿಕಾರದಿಂದ ತೆಗೆದುಹಾಕಲು ಇವನು ಆಸ್ಟ್ರಸಿಸಂ ಪದ್ಧತಿಯನ್ನು (ಬಲಿಷ್ಠನಾದ ದುರ್ಜನನ್ನು ಅಥವಾ ಜನವಿರೋಧಿಯಾದವನನ್ನು ಕೆಲವು ವರ್ಷಗಳ ಕಾಲ ಗಡೀಪಾರು ಮಾಡುವ ಪದ್ಧತಿ) ಜಾರಿಗೆ ತಂದ.
												(ಬಿ.ಎಂ.)